ದಬ್ಬಾಳಿಕೆಯ ದೂಡುವ ದೂರ..

“ಇವ್ರು ನನ್ನ ಗಂಡ,ನನಗೆ ಏನ್ ಬೇಕಾದ್ರೂ ಮಾಡೋ ಅಧಿಕಾರ ಇವ್ರಿಗಿದೆ” ಇದು ಇತ್ತೀಚಿಗೆ ಬಿಡುಗಡೆ ಆದ ಧ್ರುವಾ ಸರ್ಜಾ ಅಭಿನಯದ ‘ಪೊಗರು’ ಚಿತ್ರದ ಒಂದು ಸಂಭಾಷಣೆ.ಇದು ನಮ್ಮಲ್ಲಿ ಎಷ್ಟೋ ಜನರಿಗೆ ಸಹಜ ಎನ್ನಿಸಬಹುದು,ಆದರೆ ಅದು ತಪ್ಪು.ಗಂಡನು ಹೆಂಡತಿಗೆ ಏನು ಬೇಕಾದರೂ ಮಾಡವ ಅಧಿಕಾರ ಹೊಂದಿಲ್ಲ.ನನ್ನ ಈ ಮಾತಿಗೆ ಸಮರ್ಥನೆಯಂತೆ ಭಾರತ ಸರ್ಕಾರವು ೨೦೦೫ರಲ್ಲಿ “Protection of Women from Domestic Violence Act” ಅನ್ನು ಅಸ್ತಿತ್ವಕ್ಕೆ ತಂದಿದೆ.

ಈ ಕಾಯಿದೆಯನ್ನು ಜಾರಿಗೆ ತರುವ ಅವಶ್ಯಕತೆ ಏನಿತ್ತು? ಉತ್ತರ ‌ಸುಲಭ,ಹೆಣ್ಣುಮಕ್ಕಳ‌ ಮೇಲೆ ದೌರ್ಜನ್ಯ ನಡೆಯುತ್ತಿರುವುದೇ ಕಾರಣ.ಆದರೆ ಈ ದೌರ್ಜನ್ಯ ನಡೆಯುವುದಾದರೂ ಏಕೆ?ಇದಕ್ಕೆ ಕಾರಣ ಇರಲೇ ಬೇಕು ಅಲ್ಲವೇ? ಇದಕ್ಕೆ ಕಾರಣ ಪ್ರತಿಯೊಂದು ಗಂಡಿಗಿರುವ ತಾನು ಒಬ್ಬ ಹೆಣ್ಣಿನ ಅಧಿಕಾರಿ ಎಂಬ ಭಾವನೆ ಮತ್ತು ಮನಸ್ಥಿತಿ. ಈ ಮನಸ್ಥಿತಿ ನಮ್ಮಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎಂದರೆ ಅದು ಸಹಜತೆ ಆಗಿಬಿಟ್ಟಿದೆ.

ಗಂಡಿನಲ್ಲಿರುವ ಈ ಮನಸ್ಥಿತಿಯ ಬಗ್ಗೆ ಪ್ರತಿದಿನದ ಉದಾಹರಣೆಗಳನ್ನು ನೋಡೋಣ. “ನಾನು ನೋಡು ಎಷ್ಟು ‌ಕೆಲ್ಸ ಮಾಡ್ತೀನಿ,ಅಡ್ಗೆ ಮಾಡ್ತೀನಿ..ಬೇರೆ ಗಂಡಸ್ರು ಮಾಡ್ತಾರಾ?” ಈ ವಾಕ್ಯವಂತೂ ಎಲ್ಲರ ಮನೇಲೂ ಕೇಳಬಹುದು ಎಂದೆನಿಸುತ್ತದೆ.ಗಂಡಸರು ತಾವು ಮನೆಯಲ್ಲಿ ಮಾಡುವ ಕೆಲಸ,ಅಡುಗೆ ತಮ್ಮ ಕರ್ತವ್ಯವೇ ಹೊರತು ಅವರ ದೊಡ್ಡತನವಲ್ಲವೆಂದೂ ಅರಿಯದೆ, ಈ ವಾಕ್ಯವನ್ನು ಹೇಳುವ ಮೂಲಕ‌ ತಮ್ಮ ಹೆಚ್ಚುಗಾರಿಕೆಯ ಪ್ರದರ್ಶನ ಮಾಡುತ್ತಾ ತಮ್ಮ ಹೆಂಡತಿಯರು ತಮಗೆ ಆಭಾರಿಯಾಗಿರಬೇಕೆಂಬುದನ್ನು ಅಪೇಕ್ಷಿಸುತ್ತಾರೆ.ಇತ್ತೀಚಿಗೆ ಮೈಸೂರಿನಲ್ಲಿ ಐಎಎಸ್ ಅಧಿಕಾರಗಳ ಮಧ್ಯೆ ಮತ್ತು ರಾಜಕಾರಣಿಗಳ ಮಧ್ಯೆ ನಡೆಯುತ್ತಿರುವ ಜಟಾಪಟಿ ಎಲ್ಲರಿಗೂ ತಿಳಿದಿರುವುದೇ.ಯಾರು ಸರಿ ಯಾರು ತಪ್ಪು ಎಂಬುದು ಚರ್ಚೆಗೆ ಬಿಟ್ಟಿದ್ದು,ಆದರೆ ಶಾಸಕರಾದ ಸಾ.ರಾ.ಮಹೇಶ್ ಅವರು “ರೋಹಿಣಿ ಸಿಂಧೂರಿಯವರು ನಿವೃತ್ತಿ ಹೊಂದಿ,ಆಂಧ್ರಕ್ಕೆ ಹಿಂದಿರುಗಿ ಅಡುಗೆ ಮಾಡಿಕೊಂಡು ಮಕ್ಕಳನ್ನು ನೋಡಿಕೊಂಡಿರಲಿ” ಎಂಬ ಹೇಳಿಕೆಯನ್ನು ನೀಡುವ ಮೂಲಕ ಹೆಂಗಸರು ಅಡುಗೆ ಮನೆ ಮತ್ತು ಮಕ್ಕಳಿಗೆ ಸೀಮಿತ ಎಂಬಿರುವ ಅವರ ಮನಸ್ಥಿತಿಯನ್ನು ತೋರಿದರು.ನೀವು ಹೇಳಬಹುದು ನಿವೃತ್ತರಾದ ಮೇಲೆ ಇನ್ನೇನು ಕೆಲಸ,ಅದೇ ತಾನೆ? ಎಂದು.ಆದರೆ ರೋಹಿಣಿ ಸಿಂಧೂರಿಯವರ ಜಾಗದಲ್ಲಿ ಒಬ್ಬ ಗಂಡು ಅಧಿಕಾರಿ ಇದ್ದಿದ್ದರೆ ಇದೇ ಹೇಳಿಕೆ ನೀಡುತ್ತಿದ್ದರೇ? ಎಂದು ಯೋಚಿಸಿದಾಗ ಅವರ ಮನಸ್ಥಿತಿ ಎಂತಹದ್ದು ಮತ್ತು ಅವರ ಹೇಳಿಕೆ ಎಷ್ಟು ತಪ್ಪು ಎಂದು ತಿಳಿವುದು.

ಕನ್ನಡದ ಚಿತ್ರರಂಗದ ಹೆಸರಾಂತ ನಾಯಕ ನಟ ದರ್ಶನ್ ಅವರು ತಮ್ಮ ಹೆಂಡತಿಗೆ ಹೊಡೆದು ಜೈಲಿಗೆ ಹೋದ ವಿಚಾರ ಹೊಸದೇನು ಅಲ್ಲ.ಇದರ ಬಗ್ಗೆ ಒಂದು Live News Channel ನಲ್ಲಿ ದೂರವಾಣಿ ಕರೆಯ ಮೂಲಕ ಪ್ರಸ್ತಾಪ ಮಾಡಿದಾಗ “ನನ್ನ ಹೆಂಡತಿಗೆ ತಾನೆ ಹೊಡ್ದಿದ್ದು,ಕಂಡೋರ್ ಹೆಂಡತಿಗೆ ಹೊಡಿಲಿಲ್ವಲ್ಲಾ?” ಎಂದು ಕೇಳಿದ್ದರು.ಜೈಲಿಗೆ ಹೋದರೂ ತಾವು ಮಾಡಿದ್ದು ತಪ್ಪು ಎಂದೂ ಅರಿಯದೆ ಈ ರೀತಿ ಲಗಾಮಿಲ್ಲದೇ ಮಾತನಾಡಿದ್ದರು.

ವಾಗ್ವಾದದಲ್ಲಿ “ನಾನೇನು ಬಳೆ ತೊಟ್ಕೊಂಡಿದಿನಾ?” ಎಂಬ ಹೇಳಿಕೆಗಳನ್ನು ಎಷ್ಟು ಬಾರಿ ಕೇಳಿಲ್ಲ ನಾವು.ಎಷ್ಟು ಚಲನಚಿತ್ರದಲ್ಲಿ “ಹೆಣ್ಣಾದವಳು ತಗ್ಗಿ ಬಗ್ಗಿ ನಡಿಬೇಕು” ಎಂಬುದುನ್ನು ಕೇಳಿಲ್ಲ? ಹೆಣ್ಣಿನ ನಡುವಳಿಕೆ ಹೀಗೇ ಇರಬೇಕು,ಉಡುಪು ಹೀಗೆ ಉಡಬೇಕು ಎನ್ನುತ್ತಾ ಹೆಣ್ಣು ಏನು ಮಾಡಬೇಕು-ಮಾಡಬಾರದು,ನೋಡಲು ಹೇಗಿರಬೇಕು-ಹೇಗಿರಬಾರದು,ಏನು ಮಾತನಾಡಬೇಕು-ಮಾತನಾಡಬಾರದು,ಏನನ್ನು ‌ತೊಡಬೇಕು-ತೊಡಬಾರದು ಈ ರೀತಿ ಎಲ್ಲದಕ್ಕೂ ‌ಕಾನೂನು ಮಾಡಿರುವ ಇವರು,ತಾವು ಹೆಣ್ಣಿನ ಅಧಿಕಾರ‌ ಹೊಂದಿರುವ ಅಧಿಕಾರಿಗಳೆಂದು ಭಾವಿಸಿರುತ್ತಾರೆ,ಈ ರೀತಿ ನಿಯಮಗಳನ್ನು ಜಾರಿ ಮಾಡುವ ಅಧಿಕಾರ ಈ ಮನಸ್ಥಿತಿ ತೀರಾ ಹೆಚ್ಚಾದಾಗಲೇ ಅತ್ಯಾಚಾರಗಳಾಗುವುದು.ಇದಕ್ಕೆಲ್ಲಾ ಕಾರಣ‌ ಬರೀ ಗಂಡಸರು ಎನ್ನುವಿರಾ? ಇದಕ್ಕೆ ‌ಕಾರಣ ಹೆಂಗಸರೂ ಹೌದು.

ಯಾವುದೇ ವ್ಯಕ್ತಿಯ ಮನಸ್ಥಿತಿ ಬೆಳೆಯುವುದು ತನ್ನ ಮನೆಯಿಂದಲೇ,ಹಾಗೇ ಈ ಮನಸ್ಥಿತಿಯೂ ಬೆಳೆಯುವುದು ಮನೆಯಿಂದಲೇ.ಈ ಮನಸ್ಥಿತಿ ಎಲ್ಲಾ ರೋಗಗಳಂತೆ ಬಳುವಳಿ ಹೊಂದಿದೆ.ನಮ್ಮ ತಂದೆ ತಾಯಿಯರ ಪೀಳಿಗೆಯಲ್ಲಿ ಹೆಚ್ಚಾಗಿ ಎಲ್ಲರಿಗೂ ಒಡಹುಟ್ಟಿದವರು ಇರುತ್ತಿದ್ದರು.ಮನೆಯಲ್ಲಿ ಗಂಡು ಮಗುವಿಗೇ ಹೆಚ್ಚುಗಾರಿಕೆ,ಅವನು ವಂಶೋದ್ಧಾರಕ.ತಂದೆಯ ಜೊತೆ ಮಾತನಾಡಲು ಹೆದರುವ ಹೆಣ್ಣು ಮಕ್ಕಳು ಇದರ ಬಗ್ಗೆ ತಮ್ಮ ತಾಯಿಗೆ ಕೇಳಿದಾಗ,ತಾಯಿಯೂ ಹೆಣ್ಣು ಮಗುವಿಗೆ ಹೇಳಿಕೊಡುವುದು ಹೊಂದಾಣಿಕೆಯ ಪಾಠ,ಅಸಮಾಧಾನಗಳನ್ನು ಹೊರಹಾಕದೇ ಒಳಗೇ ಹೂತಿಟ್ಟುಕೊಳ್ಳುವ ಪಾಠ.ಗಂಡಿಗೆ ಯಾವುದರ ಹಂಗೂ ಇಲ್ಲ,ಯಾರ ಭಾವನೆಗಳಿಗೂ ಬೆಲೆ ಕೊಡುವ ಹಂಗೂ‌ ಇಲ್ಲ. ಹೆಚ್ಚುಗಾರಿಕೆಯ ಅನುಭವ ತನ್ನ ತಂದೆ-ತಾಯಿಯರಿಂದಲೇ‌ ಪಡೆದ ಇವರು,ಅದನ್ನೇ ಹೊತ್ತುಕೊಂಡಿರುತ್ತಾರೆ.ಈ ಮನಸ್ಥಿತಿಯಲ್ಲಿ ಬೆಳೆದ ನಮ್ಮ ತಂದೆ-ತಾಯಿಯರ ಪೀಳಿಗೆ ನಮ್ಮ ಪೀಳಿಗೆಗೂ ಇದನ್ನೇ ದಾಟಿಸುತ್ತಾರೆ.ವಿಪರ್ಯಾಸವೆಂದರೆ,ನಮ್ಮ ‌ತಂದೆ ತಾಯಂದಿರ ಪೀಳಿಗೆಯ ಹೆಣ್ಣುಗಳು ಇಂದು ಎಂಥಾ ದೊಡ್ಡ ಡೊಡ್ಡ ಸ್ಥಾನಗಳಲ್ಲಿ ಇದ್ದರೂ ತಮ್ಮ ಮೇಲೆ ಹೇರಲಾಗಿರುವ ಈ ಸಣ್ಣತನದ ಮನಸ್ಥಿತಿಯನ್ನು ಬಿಟ್ಟಿರುವುದಿಲ್ಲ.ಇದನ್ನೇ ತಮ್ಮ ಮಕ್ಕಳಿಗೂ ಹೇಳಿಕೊಡುತ್ತಾರೆ,ತಮ್ಮ ಹೆಣ್ಣು ಮಕ್ಕಳಿಗೂ ಅವರು ಕಲಿತ ತಪ್ಪು ಪಾಠವನ್ನು ಹೇಳಿಕೊಡುತ್ತಾರೆ.ಅವರ ಮೇಲೆ ಹೇರಲಾಗಿದ್ದ ನಿಯಮಗಳನ್ನು ತಾಯಿಯೇ ಮಗಳ ಮೇಲೆ ಹೇರುತ್ತಾಳೆ.ಉದಾಹರಣೆಗೆ ಇನ್ನೂ ಎಷ್ಟೋ ವಿದ್ಯಾವಂತ ತಾಯಂದಿರು ತಮಗೆ ಮುಟ್ಟಾದಾಗ,ಅವರು ದೇವರನ್ನು ಮುಟ್ಟುವುದಿಲ್ಲ,ಎಲ್ಲೆಲ್ಲೋ ಕೂರುವುದಿಲ್ಲ,ಪ್ರತಿ ದಿನ ಮಲಗುವ ಜಾಗದಲ್ಲಿ ಮಲಗುವುದಿಲ್ಲ,ಯಾರನ್ನೂ ಮುಟ್ಟಿಸಿಕೊಳ್ಳುವುದಿಲ್ಲ ಈ ರೀತಿ ತಮ್ಮ ಮೇಲೆ ಹೇರಲಾದ ಈ ನಿಯಮಗಳನ್ನು ತಮ್ಮ ಹೆಣ್ಣು ಮಕ್ಕಳ ಮೇಲೂ ಹೇರುತ್ತಿರುತ್ತಾರೆ. ಋತುಸ್ರಾವವಾದಾಗ ಏನೆಲ್ಲಾ ಕಿರಿಕಿರಿ,ಅಸಹನೆ,ನೋವುಗಳು ಆಗುವವು ಎಂಬುದು ತಾಯಿಗೇ ಗೊತ್ತು,ಆ ಸಮಯದಲ್ಲಿ ಇನ್ನೂ ಹೆಚ್ಚಿನ ಆರಾಮ(comfort) ಬೇಕಾಗಿರುತ್ತದೆ,ಆದರೆ ತಮ್ಮನ್ನೂ ಸೇರಿ ತಮ್ಮ ಹೆಣ್ಣು ಮಕ್ಕಳನ್ನೂ “Comfort Zone” ಇಂದ ಹೊರಗೆ ಹಾಕುತ್ತಾರೆ.ತಮ್ಮ ಮೇಲೆ ಹೇರಲಾಗಿರುವ ನಿಯಮಗಳನ್ನು ಮಕ್ಕಳ ಮೇಲೆಯೂ ಹೇರಿ ಅವರಿಗೆ ಇನ್ನೂ ಹೆಚ್ಚಿನ ಕಿರಿಕಿರಿ ಉಂಟುಮಾಡುತ್ತಾರೆ.ಹಿಂದೆ ಬರೀ ಬಟ್ಟೆಯನ್ನು ಉಪಯೋಗಿಸುತ್ತಿದ್ದರಿಂದ ತುಂಬಾ ಅಶುಚಿ‌ ಇರುತ್ತಿತ್ತು,ಬೇರೆ ಬೇರೆ ಸೋಂಕು ತಗಲುವ ಸಾಧ್ಯತೆಯೂ ಹೆಚ್ಚಿರುತ್ತಿತ್ತು..ಆದರೆ ಇದು “Sanitary Pads” ನ ಯುಗ,ಶುದ್ಧತೆಯೇ ಅದರ ಗುರಿ,ಹೀಗಿದ್ದರೂ ವಿದ್ಯಾವಂತ ತಾಯಂದಿರೇ ಇದನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಬೇಸರದ ಸಂಗತಿ.ನಾವಿಲ್ಲಿ ಗಮನಿಸಬೇಕಾದದ್ದು ಏನೆಂದರೆ ಈ ನಿಯಮಗಳನ್ನು ತಮ್ಮ ಮಕ್ಕಳ ಮೇಲೆ ಹೇರುತ್ತಿರುವುದು ಗಂಡಾದ ತಂದೆಯಲ್ಲ..ಹೆಣ್ಣಾದ ತಾಯಿಯೇ!!

ತನ್ನ ತಾಯಿಗೆ,ತನ್ನ ತಂದೆಯಿಂದ ತಮ್ಮ ಭಾವನೆಗಳಿಗೆ ನೋವಾದರೂ ಸಹಿಸಿಕೊಂಡು ಅವಳು ಅದನ್ನು ಹುದುಗುಟ್ಟಿಕೊಳ್ಳುವುದನ್ನು ನೋಡಿ ನೋಡಿ,ಮುಂದೊಂದು ದಿನ ಗಂಡು ಮಗನೂ ತನ್ನ ಹೆಂಡತಿಯ ಜೊತೆ ತನ್ನ ತಂದೆಯ ರೀತಿ ಭಾವನೆಗೆ ಬೆಲೆ ಕೊಡದ ಹಾಗೆ ನಡೆದುಕೊಳ್ಳುತ್ತಾನೆ,ತಾನು ಸರ್ವಜ್ಞ ಎಂಬ ಭಾವನೆಯಲ್ಲಿ ಬದುಕುತ್ತಿರುತ್ತಾನೆ,ಮತ್ತು ಹೆಣ್ಣು ಮಗಳೂ ಅದೇ ರೀತಿ ಭಾವನೆಗಳನ್ನು ಹುದುಗಿಟ್ಟುಕೊಳ್ಳುತ್ತಾಳೆ.

ಇವೆಲ್ಲವನ್ನೂ ಪ್ರಶ್ನಿಸುವ ಮಗಳಿಗೆ ಮರುಪ್ರಶ್ನೆ ಮಾಡುವ “ಅಹಂಕಾರಿ” ಎಂಬ ಹಣೆಪಟ್ಟಿ.ಮಗಳು ಪ್ರಶ್ನೆ ಮಾಡುವುದನ್ನೇ ಹೂತುಹಾಕಲಾಗುತ್ತದೆ.ಇಷ್ಟೊತ್ತಿಗಾಗಲೇ ತನ್ನ ತಂದೆಗೆ ಕೇಳುವುದನ್ನೇ ಬಿಟ್ಟಿರುವ ಮಗಳಿಗೆ ತಾಯಿಯಿಂದಲೂ ಬೆಂಬಲವಿಲ್ಲದೇ ತನ್ನ ಪ್ರಶ್ನೆಗಳಿಗೆ ,ಅನಿಸಿಕೆಗಳಿಗೆ ಬೆಲೆಯಿಲ್ಲದಂತಾಗಿ ಸಮಾಜ ತನ್ನ ಮೇಲೆ ಹೇರುವ ನಿಯಮಗಳನ್ನು ಇರುಸುಮುರುಸಿನಿಂದಲೇ ಪಾಲನೆ ಮಾಡಿಕೊಂಡು ತನಗೆ ಅಭಿಪ್ರಾಯಗಳೇ ಇಲ್ಲದಂತಾಗಿ,ತನಗಾಗಿಯೂ ದನಿ ಆಗಲಾರಳು.ಮಕ್ಕಳಲ್ಲಿ,ಹೆಚ್ಚಾಗಿ ಹರೆಯದ ಮಕ್ಕಳಿಗೆ ಕಾಡುವ ಖಿನ್ನತೆ ( Depression) ಗೆ ಒಂದು ಬಹಳ ಮುಖ್ಯ ಕಾರಣ,ಅವರ ತಂದೆ-ತಾಯಂದಿರೇ ಆಗಿರುತ್ತಾರೆ ಎಂಬುದು ಗಮನಾರ್ಹ.ಕೆಲವೊಮ್ಮೆ,ಗಂಡು ಮಾಡುವುದೆಲ್ಲವನ್ನೂ ನಾನು ಮಾಡಬೇಕು ಎಂಬುದರ ಮೂಲಕ ಸಮಾನತೆಯನ್ನು ಕಂಡುಕೊಳ್ಳಲು ಹೋಗಿ,ದಾರಿ ತಪ್ಪಿ,ಕೆಟ್ಟ ಚಟಗಳಿಗೆ ತುತ್ತಾಗುವ ಸಾಧ್ಯತೆಗಳೂ ಇರುತ್ತವೆ.

“ಹಿಂಗಾಡ್ದ್ರೆ , ನಿನ್ನ ಯಾರು ಕಟ್ಕೊತಾರೆ”? ನಮ್ಮ ತಂದೆ-ತಾಯಂದಿರ ಪೀಳಿಗೆಯವರು,ನಮ್ಮ ಪೀಳಿಗೆಯ ಹೆಣ್ಣು ಮಕ್ಕಳನ್ನು ಮದುವೆಯ ದೃಷ್ಟಿಯಿಂದ ಮಾತ್ರ ನೋಡುವುದನ್ನು,ಅವಳನ್ನು ‌ಮುಂದೊಂದು ದಿನ ಇನ್ನೊಬ್ಬನ ಹೆಂಡತಿಯ ದೃಷ್ಟಿಯಲ್ಲಿ ತಿದ್ದುವುದನ್ನು ಬಿಡಬೇಕು.ಮದುವೆ ಎಂಬುದು ಅವರ ಇಡೀ ಜೀವನವಲ್ಲ, ಇಂದು ಅದು ಅವರ ಜೀವನದ ಒಂದು ಭಾಗ ಮತ್ತು ಅವರ ಆಯ್ಕೆ ಆಗಿ ಮಾತ್ರ ಉಳಿದಿದೆ.

ನಮ್ಮ ತಂದೆ-ತಾಯಂದಿರು ಮತ್ತು ಅವರ ಪೀಳಿಗೆಯ ಅಭಿಪ್ರಾಯಗಳು,ಆಚರಣೆಗಳು, ಯೋಚನೆಗಳು ಯಾವಾಗಲೂ ಸರಿ ಇರಬೇಕೆಂದೇನು ಇಲ್ಲ.ಇಂದಿನ ಹೆಣ್ಣು ಮಕ್ಕಳಿಗೆ ತೆರೆತ(Exposure) ಹೆಚ್ಚಿರುತ್ತದೆ,ತಮ್ಮ ತಂದೆ-ತಾಯಂದಿರ ಪೀಳಿಗೆಯಿಂದ ನಡೆದುಕೊಂಡು ಬಂದ ದಬ್ಬಾಳಿಕೆ, ತಪ್ಪು ಕಲ್ಪನೆ,ಮನಸ್ಥಿತಿ ಮತ್ತು ಎಷ್ಟೋ ಆಚರಣೆಗಳನ್ನು ಸರಿ ಮಾಡುವ ಶಕ್ತಿ ಇರುತ್ತದೆ.ಇದು ಆಗುವುದು ಅವರು ಪ್ರಶ್ನೆ ಕೇಳಲು ಶುರು ಮಾಡಿದಾಗ.ಹೊಂದಾಣಿಕೆ ಎಂಬುದು ಪ್ರತಿ ವ್ಯಕ್ತಿಗೆ ಇರಬೇಕಾದ ಗುಣ.ಆದರೆ ಹೆಣ್ಣು‌ ಮಕ್ಕಳಿಗೆ ತಮ್ಮ ಮೇಲೆ ಆಗುವ ದಬ್ಬಾಳಿಕೆಗೂ ಹೊಂದಾಣಿಕೆ ಮಾಡಿಕೊಳ್ಳುಲು ಹೇಳಿಕೊಡಲಾಗುತ್ತದೆ.ಅದು ನಿಲ್ಲಬೇಕು,ಅವರು ಪ್ರಶ್ನೆ ಮಾಡುವ ಹಕ್ಕು ಕಿತ್ತುಕೊಳ್ಳಬಾರದು.ಅವರು ಪ್ರಶ್ನೆ ಮಾಡಿ,ತಮಗಾಗಿ ಮತ್ತು ಅವರ ಭಾವನೆಗಳಿಗಾಗಿ ನಿಲುವು ತಾಳಲು ಶುರು ಮಾಡಿದಾಗ ಅವರ ಮೇಲಿನ ದಬ್ಬಾಳಿಕೆಯೂ ಕಡಿಮೆ ಆಗುತ್ತದೆ,ಗಂಡು‌ ತಾನು ಹೆಣ್ಣಿನ ಅಧಿಕಾರಿ ಎಂಬ ಮನಸ್ಥಿತಿಯೂ ಹೋಗಿ ಸಮಾಜ ಲಿಂಗ ಸಮಾನತೆ (Gender Equality) ಕಡೆಗೆ ಮುನ್ನುಗ್ಗುತ್ತದೆ.

ಯತ್ರ ನಾರ್ಯಸ್ತು ಪೂಜ್ಯಂತೆ,ತತ್ರ ರಮಂತೇ ದೇವತಾಃ

ಎಲ್ಲಿ ಹೆಣ್ಣನ್ನು ಪೂಜಿಸಲಾಗುತ್ತದೆಯೋ,ಅಲ್ಲಿ ದೇವತೆಗಳು ನೆಲಸುತ್ತಾರೆ‌

ಕನ್ನಡದ ದೊಡ್ಡವರು ಕನ್ನಡ ನಾಡಿಗೇ ಏಕೆ ಸೀಮಿತ?

ನಮ್ಮಲ್ಲಿ ಎಷ್ಟು ಜನಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ ಬಗ್ಗೆ ತಿಳಿದಿದೆ ? ಮೊನ್ನೆ ಜೂನ್ ೪ ರಂದು ಈ ಮಹಾನುಭಾವರ ಜನ್ಮದಿನ.ಮೈಸೂರು ರಾಜ್ಯದ ಆಧುನಿಕ ಮಹಾರಾಜ.ಇವರ ಕೊಡುಗೆ ಮೈಸೂರು ರಾಜ್ಯಕ್ಕೆ ಅಪಾರ.ಮೈಸೂರು ರಾಜ್ಯವು ಸಮೃದ್ಧವಾಗಿರಬೇಕು ಎಂದು ಕನಸುಕಂಡು ಅದರೆಡೆಗೆ ದುಡಿದವರು.ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಾರು ಓಡಿಸಿದವರು ಇವರು,ಭಾರತದಲ್ಲಿ ಮೊಟ್ಟಮೊದಲ ಬಾರಿಗೆ “Long drive” ಅನ್ನು ಬೆಂಗಳೂರಿನಿಂದ ಮುಂಬೈನ ವರಗೆ ಮಾಡಿಸಿದವರು ಇವರು.ಭಾರತದಲ್ಲೇ ಮೊಟ್ಟಮೊದಲ ಬಾರಿಗೆ “Air Show” ಮಾಡಲು ಬೆಂಗಳೂರಿನ ಇಂದಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜಾಗ ಕೊಟ್ಟವರು ಇವರು.ಭಾರತದ ಮೊಟ್ಟಮೊದಲನೆಯ ಖಾಸಗಿ ವಿಮಾನ (Private Jet) ಅನ್ನು ಹೊಂದಿದ್ದವರು ಇವರು.ಶ್ರೀಲಂಕಾದ ಕೊಲಂಬೊ ಓವಲ್ ಕ್ರೀಡಾಂಗಣಕ್ಕೆ ಹಣ ಸಹಾಯ ಮಾಡಿದವರು ಇವರು.ಕೊಡಗು,ಮಂಡ್ಯ,ಮೈಸೂರು,ಚಾಮರಾಜನಗರ ಮತ್ತು ಬೆಂಗಳೂರಿನ ಜೀವನಾಡಿ ಕಾವೇರಿಗೆ ಕನ್ನಂಬಾಡಿ ಅಣೆಕಟ್ಟನ್ನು ಭಾರತ ರತ್ನ ವಿಶ್ವೇಶ್ವರಯ್ಯನವರಿಂದ ಕಟ್ಟಿಸಿದವರು ಇವರು.ಅನಕ್ಷರತೆ,ಅಸ್ಪೃಶ್ಯತೆಯ ವಿರುದ್ಧ ಹೋರಾಡಿ ಸಾಮಾಜಿಕ ಸುವ್ಯವಸ್ಥೆ, ನ್ಯಾಯ ಮತ್ತು ಶಾಂತಿಯನ್ನು ಕಾಪಾಡಿ,ರಾಮ ರಾಜ್ಯವನ್ನು ಸ್ಥಾಪಿಸಿದರು.ಮೈಸೂರು ರಾಜ್ಯದ ಆಧುನಿಕ ಬೆಳವಣಿಗಯ ರೂವಾರಿ ಇವರು.ಆದರೂ ಇವರ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ,ಈಗಿನ ಪೀಳಿಗೆಯವರಿಗಂತೂ ಇಂತಹ ವ್ಯಕ್ತಿಯೊಬ್ಬರು ಇದ್ದರು ಎಂದೂ ತಿಳಿದಿರುವುದಿಲ್ಲ.ಏಕೆ?ಯೋಚನೆ ಮಾಡಬೇಕಾದ ವಿಷಯವೇ.ಇದಕ್ಕೆ‌ ಕಾರಣ,ಇವರು ಯಾರನ್ನೂ ಟೀಕಿಸುತ್ತಿರಲಿಲ್ಲ,ಯಾವುದೇ ವ್ಯವಸ್ಥೆಯನ್ನು ದೂರದೇ,ಆ ವ್ಯವಸ್ಥೆಯಲ್ಲಿ ಪರಿವರ್ತನೆ ತರುವ ನಿಟ್ಟಿನಲ್ಲಿ ಕೆಲಸ ಮಾಡಿದವರು,ಮುಖ್ಯವಾಗಿ ಮಹಾರಾಜರು ಜಾತಿವಾದಿಗಳಾಗಿರಲಿಲ್ಲ,ತಮ್ಮನ್ನು ಒಂದು ಜಾತಿಯ ಮೂಲಕ ಗುರುತಿಸಿಕೊಳ್ಳಲಿಲ್ಲ. ಇಂದು ನಮ್ಮ‌‌ ನಾಡಿನಲ್ಲಿ ಕಂಡುಬರುವ,ಮತ್ತೆ ಮತ್ತೆ ಮುನ್ನೆಲೆಗೆ ಬರುವ ಹೆಸರುಗಳೆಲ್ಲವೂ ಒಂದು ಜಾತಿ ಅಥವಾ ಪಂಗಡದ  ಪ್ರತಿನಿಧಿಗಳು.ಇವರಿಗೆ ಸಂದ ಗೌರವ ಹಾಗೂ ಪ್ರಾಮುಖ್ಯತೆ ನಮ್ಮ ಮಹಾರಾಜರಿಗೆ ಸಿಗುವುದಿಲ್ಲ.ಬೆಂಗಳೂರಲ್ಲಂತೂ ಒಬ್ಬರ  ಹೆಸರು ಮಾತ್ರ ಎಲ್ಲ ಕಡೆಗಳಲ್ಲೂ ಕಾಣಸಿಗುವುದು.ಇನ್ನೊಂದು ದೊಡ್ಡ ಕಾರಣ ಕನ್ನಡಿಗರ ಗುಲಾಮಗಿರಿ ಮತ್ತು ಉತ್ತರ ಭಾರತದವರು ಮಾತ್ರ ಭಾರತೀಯರು,ಸಮಾಜ ಸುಧಾರಕರು,ದೊಡ್ಡ ವ್ಯಕ್ತಿತ್ವಗಳು ಎಂಬ ಮನೋಭಾವವು ನಮ್ಮ ಸಾಧಕರನ್ನು,ನಮ್ಮ ದೊಡ್ಡ ವ್ಯಕ್ತಿತ್ವಗಳನ್ನು ನಮಗೆ ಮಾತ್ರ ಸೀಮಿತಗೊಳಿಸಿದೆ.ಬೆಂಗಳೂರಿನ ಜಾಗಗಳಿಗೆಲ್ಲಾ ನಮ್ಮವರಲ್ಲದ ಹೆಸರುಗಳೇ ಹೆಚ್ಚು,ಉದಾಹರಣೆಗೆ ರಾಜಾಜಿನಗರ,ಸಂಜಯನಗರ,ಜೆ.ಪಿ.ನಗರ,ಆರ್.ಟಿ.ನಗರ,ಎಂ.ಜಿ.ರೋಡ್,ನೆಹರು ಪ್ಲಾನಟೇರಿಯಂ,ವೀರ್ ಸಾವರ್ಕರ್ ರಸ್ತೆ, ಜೆ.ಪಿ.ನಾರಾಯಣ್ ಪಾರ್ಕ್ ಈ ರೀತಿ.ಇವರು ಮಾತ್ರ ದೇಶದ ನಾಯಕರು ಎನ್ನುವ ಹಾಗೆ.ಶಿವಾಜಿ,ಮಹಾರಾಣಾ ಪ್ರತಾಪ್,ಪೃಥ್ವಿರಾಜ್ ಚೌಹಾಣ್ ಇಂಥವರು ಮಾತ್ರ ಭಾರತದ ರಾಜರು ಎನ್ನುವ ರೀತಿ ಬಿಂಬಿಸಲಾಗುತ್ತದೆ,ಇವರುಗಳ ಬಗ್ಗೆ ಎಲ್ಲಿಲ್ಲದ ಹೆಮ್ಮೆ. ನಮ್ಮ ರಾಜರುಗಳು ಬರೀ ಕನ್ನಡ ನಾಡಿಗೆ ಮಾತ್ರ ಸೀಮಿತರಾಗಿಬಿಟ್ಟಿದ್ದಾರೆ…ಕನ್ನಡಿಗರಿಗೆ ಇವರ ಬಗ್ಗೆ ಒಂದೋ ತಿಳಿದಿರುವುದಿಲ್ಲ ಅಥವಾ ತಿರಸ್ಕಾರ ಮನೋಭಾವ.ಇಲ್ಲಿ ಶಿವಾಜಿಯ ಹೆಸರಿನಲ್ಲಿ ಎಷ್ಟೋ ಜಾಗಗಳಿವೆ,ಹಾಗೆಯೇ ಮಹಾರಾಷ್ಟ್ರವನ್ನು ಆಳಿದ ಪುಲಿಕೇಶಿ,ನೃಪತುಂಗನ ಹೆಸರಿನ ಜಾಗಗಳು ಅಲ್ಲಿ ಕಂಡುಬರುವುದೇ?ಮಹಾರಾಣ ಪ್ರತಾಪನು ವೀರ ಶೂರ ಎಲ್ಲವೂ ಸರಿ,ಆದರೆ ಕನ್ನಡಿಗರಿಗೂ ಅವನಿಗೂ ಏನು ಸಂಬಂಧ? ನಮ್ಮಲ್ಲಿ ವೀರರಿಲ್ಲವೇ? ನಮ್ಮಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಲ್ಲವೇ? ಸಂಗೊಳ್ಳಿ ರಾಯಣ್ಣನಂತಹ ವೀರ ಸ್ವಾತಂತ್ರ್ಯ ಹೋರಾಟಗಾರನ ಹೆಸರು ದೆಹಲಿಯ ಜಾಗಗಳ‌ ಹೆಸರಾಗಿ ಕಂಡುಬರುವುದೇ? ಭಾರತದ ಉದ್ಧಾರಕ್ಕಾಗಿ ಮೈಸೂರು ಅರಸರ ಕೊಡುಗೆ ಅಪಾರ.ಭಾರತದಲ್ಲಿದ್ದ ೫೦೦ ಕ್ಕೂ ಹೆಚ್ಚು ಪ್ರಾಂತ್ಯಗಳ ಒಗ್ಗೂಡುವಿಕೆಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ನಮ್ಮ ಅರಸರು ಗಂಡಭೇರುಂಡ ಲಾಂಛನವಿರುವ ತಮ್ಮ ಖಾಸಗಿ ವಿಮಾನವನ್ನು ನೀಡಿದ್ದರು.ಆದರೆ ಇವರ ಹೆಸರಿನ ಉಲ್ಲೇಖ ದೇಶದ ಏಕೀಕರಣದ ಬಗ್ಗೆ ಹೇಳಿಕೊಡಬೇಕಾದರೆ ಹೇಳಿಕೊಡಲಾಗುತ್ತದೆಯೇ?ಬೇರೆಯವರಿಗೆ ಇರಲಿ,ಕನ್ನಡ ನಾಡಿನ ಮಕ್ಕಳಿಗೂ ಹೇಳಿಕೊಡಲಾಗುವುದಿಲ್ಲ.ಕನ್ನಡಿಗರು ಗುಲಾಮಗಿರಿ ಮಾಡಿಕೊಂಡಿರದಿದ್ದರೆ,ಬರೀ ಜಾತಿವಾದ‌ ಮತ್ತು  ಕೆಟ್ಟ ರಾಜಕೀಯದ ಬಗ್ಗೆ ಅಭಿರುಚಿ ಹೊಂದಿರದಿದ್ದರೆ,ನಮ್ಮ ವೀರರು ಭಾರತದ ವೀರರಾಗಿರುತ್ತಿದ್ದರು.ನಾಲ್ವಡಿ ಕೃಷ್ಣರಾಜ ಒಡೆಯರಂತಹ ಅಜಾತಶತ್ರು,ಸರ್ವಮತ ಸಮನ್ವಯಿಗಳು ಒಂದು ಉದಾಹರಣೆ ಅಷ್ಟೇ.