ಕನ್ನಡದ ದೊಡ್ಡವರು ಕನ್ನಡ ನಾಡಿಗೇ ಏಕೆ ಸೀಮಿತ?

ನಮ್ಮಲ್ಲಿ ಎಷ್ಟು ಜನಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ ಬಗ್ಗೆ ತಿಳಿದಿದೆ ? ಮೊನ್ನೆ ಜೂನ್ ೪ ರಂದು ಈ ಮಹಾನುಭಾವರ ಜನ್ಮದಿನ.ಮೈಸೂರು ರಾಜ್ಯದ ಆಧುನಿಕ ಮಹಾರಾಜ.ಇವರ ಕೊಡುಗೆ ಮೈಸೂರು ರಾಜ್ಯಕ್ಕೆ ಅಪಾರ.ಮೈಸೂರು ರಾಜ್ಯವು ಸಮೃದ್ಧವಾಗಿರಬೇಕು ಎಂದು ಕನಸುಕಂಡು ಅದರೆಡೆಗೆ ದುಡಿದವರು.ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಾರು ಓಡಿಸಿದವರು ಇವರು,ಭಾರತದಲ್ಲಿ ಮೊಟ್ಟಮೊದಲ ಬಾರಿಗೆ “Long drive” ಅನ್ನು ಬೆಂಗಳೂರಿನಿಂದ ಮುಂಬೈನ ವರಗೆ ಮಾಡಿಸಿದವರು ಇವರು.ಭಾರತದಲ್ಲೇ ಮೊಟ್ಟಮೊದಲ ಬಾರಿಗೆ “Air Show” ಮಾಡಲು ಬೆಂಗಳೂರಿನ ಇಂದಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜಾಗ ಕೊಟ್ಟವರು ಇವರು.ಭಾರತದ ಮೊಟ್ಟಮೊದಲನೆಯ ಖಾಸಗಿ ವಿಮಾನ (Private Jet) ಅನ್ನು ಹೊಂದಿದ್ದವರು ಇವರು.ಶ್ರೀಲಂಕಾದ ಕೊಲಂಬೊ ಓವಲ್ ಕ್ರೀಡಾಂಗಣಕ್ಕೆ ಹಣ ಸಹಾಯ ಮಾಡಿದವರು ಇವರು.ಕೊಡಗು,ಮಂಡ್ಯ,ಮೈಸೂರು,ಚಾಮರಾಜನಗರ ಮತ್ತು ಬೆಂಗಳೂರಿನ ಜೀವನಾಡಿ ಕಾವೇರಿಗೆ ಕನ್ನಂಬಾಡಿ ಅಣೆಕಟ್ಟನ್ನು ಭಾರತ ರತ್ನ ವಿಶ್ವೇಶ್ವರಯ್ಯನವರಿಂದ ಕಟ್ಟಿಸಿದವರು ಇವರು.ಅನಕ್ಷರತೆ,ಅಸ್ಪೃಶ್ಯತೆಯ ವಿರುದ್ಧ ಹೋರಾಡಿ ಸಾಮಾಜಿಕ ಸುವ್ಯವಸ್ಥೆ, ನ್ಯಾಯ ಮತ್ತು ಶಾಂತಿಯನ್ನು ಕಾಪಾಡಿ,ರಾಮ ರಾಜ್ಯವನ್ನು ಸ್ಥಾಪಿಸಿದರು.ಮೈಸೂರು ರಾಜ್ಯದ ಆಧುನಿಕ ಬೆಳವಣಿಗಯ ರೂವಾರಿ ಇವರು.ಆದರೂ ಇವರ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ,ಈಗಿನ ಪೀಳಿಗೆಯವರಿಗಂತೂ ಇಂತಹ ವ್ಯಕ್ತಿಯೊಬ್ಬರು ಇದ್ದರು ಎಂದೂ ತಿಳಿದಿರುವುದಿಲ್ಲ.ಏಕೆ?ಯೋಚನೆ ಮಾಡಬೇಕಾದ ವಿಷಯವೇ.ಇದಕ್ಕೆ‌ ಕಾರಣ,ಇವರು ಯಾರನ್ನೂ ಟೀಕಿಸುತ್ತಿರಲಿಲ್ಲ,ಯಾವುದೇ ವ್ಯವಸ್ಥೆಯನ್ನು ದೂರದೇ,ಆ ವ್ಯವಸ್ಥೆಯಲ್ಲಿ ಪರಿವರ್ತನೆ ತರುವ ನಿಟ್ಟಿನಲ್ಲಿ ಕೆಲಸ ಮಾಡಿದವರು,ಮುಖ್ಯವಾಗಿ ಮಹಾರಾಜರು ಜಾತಿವಾದಿಗಳಾಗಿರಲಿಲ್ಲ,ತಮ್ಮನ್ನು ಒಂದು ಜಾತಿಯ ಮೂಲಕ ಗುರುತಿಸಿಕೊಳ್ಳಲಿಲ್ಲ. ಇಂದು ನಮ್ಮ‌‌ ನಾಡಿನಲ್ಲಿ ಕಂಡುಬರುವ,ಮತ್ತೆ ಮತ್ತೆ ಮುನ್ನೆಲೆಗೆ ಬರುವ ಹೆಸರುಗಳೆಲ್ಲವೂ ಒಂದು ಜಾತಿ ಅಥವಾ ಪಂಗಡದ  ಪ್ರತಿನಿಧಿಗಳು.ಇವರಿಗೆ ಸಂದ ಗೌರವ ಹಾಗೂ ಪ್ರಾಮುಖ್ಯತೆ ನಮ್ಮ ಮಹಾರಾಜರಿಗೆ ಸಿಗುವುದಿಲ್ಲ.ಬೆಂಗಳೂರಲ್ಲಂತೂ ಒಬ್ಬರ  ಹೆಸರು ಮಾತ್ರ ಎಲ್ಲ ಕಡೆಗಳಲ್ಲೂ ಕಾಣಸಿಗುವುದು.ಇನ್ನೊಂದು ದೊಡ್ಡ ಕಾರಣ ಕನ್ನಡಿಗರ ಗುಲಾಮಗಿರಿ ಮತ್ತು ಉತ್ತರ ಭಾರತದವರು ಮಾತ್ರ ಭಾರತೀಯರು,ಸಮಾಜ ಸುಧಾರಕರು,ದೊಡ್ಡ ವ್ಯಕ್ತಿತ್ವಗಳು ಎಂಬ ಮನೋಭಾವವು ನಮ್ಮ ಸಾಧಕರನ್ನು,ನಮ್ಮ ದೊಡ್ಡ ವ್ಯಕ್ತಿತ್ವಗಳನ್ನು ನಮಗೆ ಮಾತ್ರ ಸೀಮಿತಗೊಳಿಸಿದೆ.ಬೆಂಗಳೂರಿನ ಜಾಗಗಳಿಗೆಲ್ಲಾ ನಮ್ಮವರಲ್ಲದ ಹೆಸರುಗಳೇ ಹೆಚ್ಚು,ಉದಾಹರಣೆಗೆ ರಾಜಾಜಿನಗರ,ಸಂಜಯನಗರ,ಜೆ.ಪಿ.ನಗರ,ಆರ್.ಟಿ.ನಗರ,ಎಂ.ಜಿ.ರೋಡ್,ನೆಹರು ಪ್ಲಾನಟೇರಿಯಂ,ವೀರ್ ಸಾವರ್ಕರ್ ರಸ್ತೆ, ಜೆ.ಪಿ.ನಾರಾಯಣ್ ಪಾರ್ಕ್ ಈ ರೀತಿ.ಇವರು ಮಾತ್ರ ದೇಶದ ನಾಯಕರು ಎನ್ನುವ ಹಾಗೆ.ಶಿವಾಜಿ,ಮಹಾರಾಣಾ ಪ್ರತಾಪ್,ಪೃಥ್ವಿರಾಜ್ ಚೌಹಾಣ್ ಇಂಥವರು ಮಾತ್ರ ಭಾರತದ ರಾಜರು ಎನ್ನುವ ರೀತಿ ಬಿಂಬಿಸಲಾಗುತ್ತದೆ,ಇವರುಗಳ ಬಗ್ಗೆ ಎಲ್ಲಿಲ್ಲದ ಹೆಮ್ಮೆ. ನಮ್ಮ ರಾಜರುಗಳು ಬರೀ ಕನ್ನಡ ನಾಡಿಗೆ ಮಾತ್ರ ಸೀಮಿತರಾಗಿಬಿಟ್ಟಿದ್ದಾರೆ…ಕನ್ನಡಿಗರಿಗೆ ಇವರ ಬಗ್ಗೆ ಒಂದೋ ತಿಳಿದಿರುವುದಿಲ್ಲ ಅಥವಾ ತಿರಸ್ಕಾರ ಮನೋಭಾವ.ಇಲ್ಲಿ ಶಿವಾಜಿಯ ಹೆಸರಿನಲ್ಲಿ ಎಷ್ಟೋ ಜಾಗಗಳಿವೆ,ಹಾಗೆಯೇ ಮಹಾರಾಷ್ಟ್ರವನ್ನು ಆಳಿದ ಪುಲಿಕೇಶಿ,ನೃಪತುಂಗನ ಹೆಸರಿನ ಜಾಗಗಳು ಅಲ್ಲಿ ಕಂಡುಬರುವುದೇ?ಮಹಾರಾಣ ಪ್ರತಾಪನು ವೀರ ಶೂರ ಎಲ್ಲವೂ ಸರಿ,ಆದರೆ ಕನ್ನಡಿಗರಿಗೂ ಅವನಿಗೂ ಏನು ಸಂಬಂಧ? ನಮ್ಮಲ್ಲಿ ವೀರರಿಲ್ಲವೇ? ನಮ್ಮಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಲ್ಲವೇ? ಸಂಗೊಳ್ಳಿ ರಾಯಣ್ಣನಂತಹ ವೀರ ಸ್ವಾತಂತ್ರ್ಯ ಹೋರಾಟಗಾರನ ಹೆಸರು ದೆಹಲಿಯ ಜಾಗಗಳ‌ ಹೆಸರಾಗಿ ಕಂಡುಬರುವುದೇ? ಭಾರತದ ಉದ್ಧಾರಕ್ಕಾಗಿ ಮೈಸೂರು ಅರಸರ ಕೊಡುಗೆ ಅಪಾರ.ಭಾರತದಲ್ಲಿದ್ದ ೫೦೦ ಕ್ಕೂ ಹೆಚ್ಚು ಪ್ರಾಂತ್ಯಗಳ ಒಗ್ಗೂಡುವಿಕೆಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ನಮ್ಮ ಅರಸರು ಗಂಡಭೇರುಂಡ ಲಾಂಛನವಿರುವ ತಮ್ಮ ಖಾಸಗಿ ವಿಮಾನವನ್ನು ನೀಡಿದ್ದರು.ಆದರೆ ಇವರ ಹೆಸರಿನ ಉಲ್ಲೇಖ ದೇಶದ ಏಕೀಕರಣದ ಬಗ್ಗೆ ಹೇಳಿಕೊಡಬೇಕಾದರೆ ಹೇಳಿಕೊಡಲಾಗುತ್ತದೆಯೇ?ಬೇರೆಯವರಿಗೆ ಇರಲಿ,ಕನ್ನಡ ನಾಡಿನ ಮಕ್ಕಳಿಗೂ ಹೇಳಿಕೊಡಲಾಗುವುದಿಲ್ಲ.ಕನ್ನಡಿಗರು ಗುಲಾಮಗಿರಿ ಮಾಡಿಕೊಂಡಿರದಿದ್ದರೆ,ಬರೀ ಜಾತಿವಾದ‌ ಮತ್ತು  ಕೆಟ್ಟ ರಾಜಕೀಯದ ಬಗ್ಗೆ ಅಭಿರುಚಿ ಹೊಂದಿರದಿದ್ದರೆ,ನಮ್ಮ ವೀರರು ಭಾರತದ ವೀರರಾಗಿರುತ್ತಿದ್ದರು.ನಾಲ್ವಡಿ ಕೃಷ್ಣರಾಜ ಒಡೆಯರಂತಹ ಅಜಾತಶತ್ರು,ಸರ್ವಮತ ಸಮನ್ವಯಿಗಳು ಒಂದು ಉದಾಹರಣೆ ಅಷ್ಟೇ.

Leave a Comment